ಓಡುವ ಗಡಿಯಾರ - ಗಾಯತ್ರಿ ರವಿ
" ಓಡುವ ಗಡಿಯಾರ " ಗಾಯತ್ರಿ ರವಿಯವರು ಬರೆದಿರುವಂತಹ ಕವನ ಸಂಕಲನವಾಗಿದೆ. ಇವರು ಪ್ರಸ್ತುತ ಅಂಚೆ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮನೆ ಮತ್ತು ಕಛೇರಿಯ ಬಿಡುವಿಲ್ಲದ ಕೆಲಸಗಳ ನಡುವೆಯೂ ಸಣ್ಣ ರಂಧ್ರದ ಮೂಲಕ ಹೊರ ಬಂದ ಅಕ್ಷರ ಮಾಲೆಯೇ " ಓಡುವ ಗಡಿಯಾರ " ಎಂಬ ಕವನ ಸಂಕಲನ. ಇವರ ಕವನ ಸಂಕಲನದಲ್ಲಿನ ಕವಿತೆಗಳು ಜೀವನ, ಸಂಬಂಧಗಳು, ಪ್ರಕೃತಿಯ ಸೊಬಗು, ಅನುಭವಗಳು ಮತ್ತು ಆತ್ಮಾವಲೋಕನವನ್ನು ಗಾಜಿನ ಮನೆಯಂತೆ ಅತ್ಯಂತ ಸೂಕ್ಷ್ಮವಾಗಿ ದರ್ಶಿಸುತ್ತವೆ. ಕವಿತೆಗಳಲ್ಲಿನ ವಾಚ್ಯಾರ್ಥವು ಸರಳವೆನಿಸಿದರೂ ಸಹ ಒಳಾರ್ಥವು ಬಾವಿಯ ತಳವನ್ನು ಮುಟ್ಟುತ್ತವೆ. ಈ ಕವನ ಸಂಕಲನದ ಪ್ರಮುಖ ವಿಶೇಷತೆ ಯೇ ಇದರಲ್ಲಿ ಬಳಕೆಯಾದ ಸರಳ ಭಾಷೆ. ಲೇಖಕರು ನಿತ್ಯ ಜೀವನದ ತಮ್ಮ ಅನುಭವಗಳನ್ನು ವಾಚಕರಿಗೆ ಬೆಣ್ಣೆಯಲ್ಲಿ ಸೂಜಿ ತೆಗೆದ ಹಾಗೆ ಅರ್ಥವಾಗುವಂತೆ ಬರೆದಿದ್ದಾರೆ. ಕೆಲವು ಕವಿತೆಗಳಲ್ಲಿ ತಮ್ಮ ಅಂತರಂಗದ ಭಾವನೆಗಳನ್ನು ತಮ್ಮ ಆತ್ಮೀಯರಿಗೆ ತಿಳಿಸುವ ಪ್ರಯತ್ನ ಮಾಡಿದ್ದಾರೆ. " ನನಗೆ ತಿಳಿಯದ್ದು " ಎಂಬ ಕವನದಲ್ಲಿ, ಅನಿಸಿದ್ದನು ಹೇಳಿಬಿಡು, ಸಿಕ್ಕದನ್ನ ಪಡೆದುಕೊಂಡು ಬಿಡು ಎಂದು ತಮ್ಮ ಪ್ರೀತಿಯ ಗೆಳೆಯನಿಗೆ ಹೇಳುತ್ತ, ಸಮಯ ಯಾರಿಗೂ ಕಾಯುವುದಿಲ್ಲ, ಅದು " ಓಡುವ ಗಡಿಯಾರ " ಎಂಬಂತೆ ಸೊಗಸಾಗಿ ಪದಗಳನ್ನು ಹೆಣೆದಿದ್ದಾರೆ. ನಾನು ಮೊದಲೇ ಹೇಳಿದಂತೆ ಈ ಕವನ ಸಂಕಲನವು ಅತ್ಯಂತ ಸರಳ ಭಾಷೆಯಲ್ಲಿ ಇರುವುದರಿಂದ, ಬರ...