ಓಡುವ ಗಡಿಯಾರ - ಗಾಯತ್ರಿ ರವಿ
"ಓಡುವ ಗಡಿಯಾರ" ಗಾಯತ್ರಿ ರವಿಯವರು ಬರೆದಿರುವಂತಹ ಕವನ ಸಂಕಲನವಾಗಿದೆ. ಇವರು ಪ್ರಸ್ತುತ ಅಂಚೆ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮನೆ ಮತ್ತು ಕಛೇರಿಯ ಬಿಡುವಿಲ್ಲದ ಕೆಲಸಗಳ ನಡುವೆಯೂ ಸಣ್ಣ ರಂಧ್ರದ ಮೂಲಕ ಹೊರ ಬಂದ ಅಕ್ಷರ ಮಾಲೆಯೇ "ಓಡುವ ಗಡಿಯಾರ" ಎಂಬ ಕವನ ಸಂಕಲನ.
ಇವರ ಕವನ ಸಂಕಲನದಲ್ಲಿನ ಕವಿತೆಗಳು ಜೀವನ, ಸಂಬಂಧಗಳು, ಪ್ರಕೃತಿಯ ಸೊಬಗು, ಅನುಭವಗಳು ಮತ್ತು ಆತ್ಮಾವಲೋಕನವನ್ನು ಗಾಜಿನ ಮನೆಯಂತೆ ಅತ್ಯಂತ ಸೂಕ್ಷ್ಮವಾಗಿ ದರ್ಶಿಸುತ್ತವೆ. ಕವಿತೆಗಳಲ್ಲಿನ ವಾಚ್ಯಾರ್ಥವು ಸರಳವೆನಿಸಿದರೂ ಸಹ ಒಳಾರ್ಥವು ಬಾವಿಯ ತಳವನ್ನು ಮುಟ್ಟುತ್ತವೆ.
ಈ ಕವನ ಸಂಕಲನದ ಪ್ರಮುಖ ವಿಶೇಷತೆಯೇ ಇದರಲ್ಲಿ ಬಳಕೆಯಾದ ಸರಳ ಭಾಷೆ. ಲೇಖಕರು ನಿತ್ಯ ಜೀವನದ ತಮ್ಮ ಅನುಭವಗಳನ್ನು ವಾಚಕರಿಗೆ ಬೆಣ್ಣೆಯಲ್ಲಿ ಸೂಜಿ ತೆಗೆದ ಹಾಗೆ ಅರ್ಥವಾಗುವಂತೆ ಬರೆದಿದ್ದಾರೆ.
ಕೆಲವು ಕವಿತೆಗಳಲ್ಲಿ ತಮ್ಮ ಅಂತರಂಗದ ಭಾವನೆಗಳನ್ನು ತಮ್ಮ ಆತ್ಮೀಯರಿಗೆ ತಿಳಿಸುವ ಪ್ರಯತ್ನ ಮಾಡಿದ್ದಾರೆ. "ನನಗೆ ತಿಳಿಯದ್ದು " ಎಂಬ ಕವನದಲ್ಲಿ, ಅನಿಸಿದ್ದನು ಹೇಳಿಬಿಡು, ಸಿಕ್ಕದನ್ನ ಪಡೆದುಕೊಂಡು ಬಿಡು ಎಂದು ತಮ್ಮ ಪ್ರೀತಿಯ ಗೆಳೆಯನಿಗೆ ಹೇಳುತ್ತ, ಸಮಯ ಯಾರಿಗೂ ಕಾಯುವುದಿಲ್ಲ, ಅದು "ಓಡುವ ಗಡಿಯಾರ" ಎಂಬಂತೆ ಸೊಗಸಾಗಿ ಪದಗಳನ್ನು ಹೆಣೆದಿದ್ದಾರೆ.
ನಾನು ಮೊದಲೇ ಹೇಳಿದಂತೆ ಈ ಕವನ ಸಂಕಲನವು ಅತ್ಯಂತ ಸರಳ ಭಾಷೆಯಲ್ಲಿ ಇರುವುದರಿಂದ, ಬರೀ ಸಾಹಿತ್ಯದಲ್ಲಿ ಆಸಕ್ತಿ ಇರುವವರಿಗೆ ಅಷ್ಟೇ ಅಲ್ಲದೆ ಸಾಮಾನ್ಯ ಓದುಗರಿಗೂ ಸಹ ತಲುಪುತ್ತದೆ.
"ಓಡುವ ಗಡಿಯಾರ" ಬರೀ ಕವನ ಸಂಕಲನವಲ್ಲ ಇದು ಜೀವನವನ್ನು ನೋಡುವ ಹೊಸ ದೃಷ್ಟಿಕೋನ. ಈ ಕವನ ಸಂಕಲನವು ಸಾಹಿತ್ಯಾಸಕ್ತರಿಗೆ ಹೇಳಿ ಮಾಡಿಸಿದ ಅದ್ಭುತ ಕೃತಿಯಾಗಿದೆ.
- ರಾಜೇಶ್ ಕೆಳದಿಮಠ
ಆಯ್ದ ಕವನ:
"ನನಗೆ ತಿಳಿಯದ್ದು"
ನನಗೆ ತಿಳಿಯದ್ದು
ನಿನಗೇನಾದರೂ ಹೊಳೆದರೆ
ಥಟ್ಟನೇ ಹೇಳಿಬಿಡು ಗೆಳೆಯ
ಸಮಯ ಯಾರನ್ನೂ ಕಾಯುವುದಿಲ್ಲ.
ನಾನು ಕೇಳಿಸಿಕೊಳ್ಳಲಾರದ್ದು
ನೀನೇನಾದರೂ ಆಲಿಸಿದ್ದೆಯಾದರೆ
ಮನಸ್ಸು ತುಂಬಿಕೊಂಡು ಬಿಡು ಗೆಳೆಯ,
ಆಲಿಸುವುದರಲ್ಲಿಯ ಸಮಾಧಾನ
ಕೇಳುವುದರಲ್ಲಿಲ್ಲ ಗೆಳೆಯ !
ನನಗೆ ಕಹಿ ಎನಿಸಿದ್ದು
ನಿನಗೇನಾದರೂ ಸಿಹಿ ಎನಿಸಿದರೆ
ಸ್ವೀಕರಿಸಿಬಿಡು ಗೆಳೆಯ;
ತಡವಾದರೆ ಅದರ ರುಚಿ
ಕಡಿಮೆಯಾಗಬಹುದು
ನನಗೆ ಬೇಡವಾದದ್ದು
ನಿನಗೇನಾದರೂ ಬೇಕೆನಿಸಿದರೆ
ಆಯ್ದುಕೊಂಡು ಬಿಡು ಗೆಳೆಯ;
ಬೇಕೆನಿಸಿದ್ದು ಬೇಡವಾಗಲು
ಕ್ಷಣ ಮಾತ್ರ ಸಾಕು.
ನನಗೆ ಕಾಣಲಾರದ್ದು
ನಿನಗೇನಾದರೂ ಕಂಡದ್ದೇಯಾದರೆ
ಕಣ್ಣುಂಬಿಕೊಂಡುಬಿಡು ಗೆಳೆಯ,
ಕಣ್ಣು ಮಿಟುಕುವುದರಲ್ಲಿ
ಕಾಣಿಯಾಗಬಹುದು ಮಿಂಚು ಗೆಳೆಯ
ನನಗೆ ಸಿಗದ ಪ್ರೀತಿ
ನಿನಗೇನಾದರೂ ಒಲಿದುದಾದರೆ
ಒಪ್ಪಿಸಿಕೊಂಡುಬಿಡು ಗೆಳೆಯ
ಒಲಿನ ಮನಸ್ಸು ಒಡೆಯಬಾರದು ಗೆಳೆಯ
ನನಗೆ ನಿಲುಕಲಾರದ ಕನಸು
ನಿನ್ನ ಬೊಗಸೆಗೆ ಬಿದ್ದರೆ
ಮೆಲ್ಲ ಮೆಲ್ಲನೇ ಹಾರಿಬಿಡು ಗೆಳೆಯ
ಕವಿತೆಗೆರಡು ರೆಕ್ಕೆ ಮೂಡಿ
ತೆರೆದುಕೊಳ್ಳಲಿ ಹೃದಯ ಗೆಳೆಯ.
- ಗಾಯತ್ರಿ ರವಿ

Comments
Post a Comment